ಹಿಂದಿ ಸೇರಿ ೪ ಭಾಷೆಗಳಿಗೆ ಡಬ್ ಆಗುತ್ತಿರುವ ಚಿತ್ರ ರೆಡ್
Posted date: 31 Thu, Mar 2016 – 09:42:24 AM

ಕನ್ನಡ ಚಿತ್ರರಂಗ ಇದೀಗ ಹೊಸಹೊಸ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಿದೆ. ಫ್ಯಾಮಿಲಿ, ಲವ್, ಸೆಂಟಿಮೆಂಟ್, ಆಕ್ಷನ್  ಚಿತ್ರಗಳನ್ನು ಸದಾ ವೀಕ್ಷಿಸುತ್ತಿದ್ದ  ಪ್ರೇಕ್ಷಕ  ಇತ್ತೀಚೆಗೆ ಆಧುನಿಕ ಶೈಲಿಯ  ನಿರೂಪಣೆ ಇರುವಂಥ ಚಿತ್ರಗಳನ್ನು ಇಷ್ಟಪಡುತ್ತಿದ್ದಾನೆ. ಅದರಲ್ಲೂ ಸಸ್ಪೆನ್, ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟ್ರಿ ಹೊಂದಿದ ಚಿತ್ರಗಳತ್ತ ಸ್ಯಾಂಡಲ್‌ವುಡ್ ಪ್ರೇಕ್ಷಕನ ಚಿತ್ತ ಹರಿದಿದೆ. ಸಿನಿಪ್ರೇಮಿಗಳ ಅಭಿರುಚಿ ಅರಿತ ನಮ್ಮ  ನಿರ್ದೇಶಕರು ಕೂಡ ಅಂಥ ಚಿತ್ರಗಳ ಕಡೆ ತಮ್ಮ ಗಮನ ಹರಿಸಿದ್ದಾರೆ. ಅದೇರೀತಿ ನಿರ್ದೇಶಕ ರಾಜೇಶ್‌ಮೂರ್ತಿ ಅವರು ರೊಮ್ಯಾಂಟಿಕ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟ್ರಿ ಎಳೆ ಹೊಂದಿದ ರೆಡ್ ಹೆಸರಿನ ಚಲನಚಿತ್ರವೊಂದನ್ನು  ತಯಾರಿಸಿ ಇದೇ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಮಾಡುವ ಸಿದ್ದತೆಯಲ್ಲಿ ತೊಡಗಿದ್ದಾರೆ.  ರಾಮ್‌ಗೋಪಾಲ್ ವರ್ಮ, ಮಹೇಶ್ ಭಟ್ ಚಿತ್ರಗಳ  ಛಾಯೆ ಹೊಂದಿದೆ ಎನ್ನಲಾದ ಈ ಚಿತ್ರದ ಬಗ್ಗೆ ಇದೀಗ ಮತ್ತೊಂದು ಸುದ್ದಿ ಹೊರಬಂದಿದೆ. ಅದೇನೆಂದರೆ ಸಾಮಾನ್ಯವಾಗಿ ಒಂದು ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡ ನಂತರ ಆ ಚಿತ್ರವನ್ನು ಪರಭಾಷೆಗಳಿಗೆ  ರೀಮೇಕ್ ಅಥವಾ ಡಬ್ಬಿಂಗ್ ಮಾಡಲು ಬೇರೆ ನಿರ್ಮಾಪಕರು ಮುಂದೆ ಬರುತ್ತಾರೆ.   ಆದರೆ ರೆಡ್  ಚಿತ್ರ ಇನ್ನೂ ಕನ್ನಡದಲ್ಲಿ ಬಿಡುಗಡೆಯಾಗುವ ಸಿದ್ದತೆಯಲ್ಲಿರುವಾಗಲೇ ಚಿತ್ರದ ಡಬ್ಬಿಂಗ್ ರೈಟ್ಸ್  ಒಳ್ಳೇ ಬೆಲೆಗೆ ಮಾರಾಟವಾಗಿದೆ,  ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿ ೪ ಭಾಷೆಗಳಿಗೆ ಈ ಚಿತ್ರ ಡಬ್ಬಿಂಗ್ ಆಗುತ್ತಿದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ರಾಜೇಶ್‌ಮೂರ್ತಿ ಅವರು ಸಂತಸದಿಂದ ಹೇಳಿಕೊಂಡಿದ್ದಾರೆ.
ಷಡ್ಯಂತ್ರ, ಮನಿ ಹನಿ ಶನಿ  ಎಂಬ ೨ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜೇಶ್‌ಮೂರ್ತಿ ಅವರಿಗೆ  ರೆಡ್ ಮೂರನೇ ಪ್ರಯತ್ನ. ಒಂದೇ ರಥದ ೨ ಚಕ್ರಗಳಂತಿರಬೇಕಾದ  ಪತಿ-ಪತ್ನಿ ಸಂಬಂಧಗಳು  ಇನ್ನೊಬ್ಬ  ವ್ಯಕ್ತಿಯ ಪ್ರವೇಶದಿಂದ ಹೇಗೆ ಹಾಳಾಗುತ್ತವೆ ಎಂಬುದನ್ನು  ರೆಡ್ ಚಿತ್ರದಲಿ ನಿರೂಪಿಸಲಾಗಿದೆ.  ಬೆಂಗಳೂರು ನಗರದ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು.  ಮಾಡ್ರನ್ ಲೈಫ್‌ಸ್ಟೈಲ್‌ನಿಂದ  ಏನೆಲ್ಲ ಅತ್ಯಾಚಾರ-ಅನಾಚಾರಗಳು ನಡೆಯುತ್ತವೆ, ಮನುಷ್ಯ ಹೇಗೆ ತನ್ನ ಮನುಷ್ಯತ್ವವನ್ನೇ ಮರೆಯುತ್ತಾನೆ  ಎನ್ನುವಂಥ ಸೂಕ್ಷ್ಮವಾದ ಅನೇಕ ವಿಚಾರಗಳನ್ನು ರೆಡ್ ಚಿತ್ರದಲ್ಲಿ  ವಿವರಿಸಲಾಗಿದೆ. ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ರಾಜೇಶ್ ಮೂರ್ತಿರವರು ಸಂಕಲನ ಹಾಗೂ ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಈ ಚಿತ್ರಕ್ಕೆ ನಾಗೇಶ್ ಸಾಹಿತ್ಯ, ಕಾರ್ತಿಕ್ ಸಂಭಾಷಣೆ ಬರೆದಿದ್ದು ಅಂಜನಾ ಛಾಯಾಗ್ರಹಣ ಮಾಡಿದ್ದಾರೆ. ರಾಜ್ ಆರ್ಯನ್, ಕಾಮಿನಿ, ರಾಹುಲ್ ಸೋಮಣ್ಣ ಎಂ.ಜೆ.ಪೃಥ್ವಿ ಹಾಗೂ ಪಂಚಮಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed